ಬ್ರ್ಯಾಗ್, ವಿಲಿಯಮ್ ಹೆನ್ರಿ	
1862-1942. ಇಂಗ್ಲಿಷ್ ಭೌತವಿಜ್ಞಾನಿ. ಜನನ: ವೈಟನ್, ಕಂಬರ್ಲೆಂಡ್, 2 ಜುಲೈ 1862. ಮರಣ: ಲಂಡನ್, 12 ಮಾರ್ಚ್ 1942. ಕೃಷಿ ಮತ್ತು ನೌಕಾವಾಣಿಜ್ಯ ಹಿನ್ನೆಲೆಯಿದ್ದ ಆದರೆ ಶೈಕ್ಷಣಿಕ ಹಿನ್ನೆಲೆ ವಿಶೇಷವೇನೂ ಇರದಿದ್ದ ಮನೆತನದಿಂದ ಬಂದ ಬ್ರ್ಯಾಗ್ ಶುದ್ಧ ವಿಜ್ಞಾನ ಪ್ರಪಂಚಕ್ಕೆ ಪ್ರವೇಶಪಡೆದದ್ದೂ ಅಲ್ಲಿ ಮುಂಚೂಣಿ ಸಂಶೋಧಕನಾಗಿ ಹೆಸರು ಗಳಿಸಿದ್ದೂ ಸಂದರ್ಭಗಳ ವಿಶೇಷ ಹೊಂದಾಣಿಕೆಯ ಫಲ.

	ಏಳರ ಹರೆಯದಲ್ಲಿ ತಾಯಿ ಗತಿಸಿದಾಗ ಈತನನ್ನು ಲೀಸ್ಟರ್‍ಶೈರಿನಲ್ಲಿದ್ದ ಕಕ್ಕಂದಿರ ಮನೆಗೆ ಕಳಿಸಿ ಅಲ್ಲಿಯ ಒಂದು ಶಾಲೆಗೆ ಸೇರಿಸಿದರು. ಈ ಸೂಟಿ ಬಾಲಕ ಪರೀಕ್ಷೆಯಲ್ಲಿ ಚೆನ್ನಾಗಿ ಉತ್ತೀರ್ಣನಾಗಿ ತರಗತಿಯ ಹಿರೇಮಣಿ ಆದ. ಅಲ್ಲಿಯ ಪರಿಸ್ಥಿತಿ ಹೇಗಿತ್ತು? ಆವಿಷ್ಟ ಧಾರ್ಮಿಕ ವಾತಾವರಣ, ಬೈಬಲಿನಲ್ಲಿ ಉಕ್ತವಾಗಿದ್ದ ಘಟನೆಗಳನ್ನು ವರ್ಣಿಸುವವರ ಕಲ್ಪನೆಗೆ ಅಂಕುಶರಹಿತ ಲಾಸ್ಯ, ಮರಣೋತ್ತರ ಜೀವನದಲ್ಲಿ ಒದಗಬಹುದಾದ ಭೀಕರನರಕ, ಜಂಜಾಟ, ಕುಂಭೀಪಾಕ ಮುಂತಾದ ಕ್ರೂರ ಶಿಕ್ಷೆಗಳ ಬಗ್ಗೆ ಬೀಭತ್ಸ ಅನುಭವ, ಬೈಬಲಿನ ಪದಶಃ ವಿವರಣೆಯ ಪರಿಣಾಮವಿದು. ಮುಂದೊಂದು ದಿನ ವಾಸ್ತವಸ್ಥಿತಿ ಸ್ಪಷ್ಟವಾದಾಗ, ಆ ತನಕ ಬೈಬಲ್ ವಾಚನದ ಬಗ್ಗೆ ಭಯಮಿಶ್ರಿತ ತಿರಸ್ಕಾರ ತಳೆದಿದ್ದ ಬ್ರ್ಯಾಗ್ ಬರೆದ "ಮಾನವನ ಉದ್ದೇಶ ಧರ್ಮದಿಂದ ನಿರ್ಣಿತವಾಗುತ್ತದೆ, ಅದನ್ನು ಸಾಧಿಸುವ ಸಾಮಥ್ರ್ಯ ವಿಜ್ಞಾನದಿಂದ ಒದಗುತ್ತದೆ."
1881ರಲ್ಲಿ ಕೇಂಬ್ರಿಜ್ ಪ್ರವೇಶಿಸಿ ಗಣಿತದಲ್ಲಿ ಉನ್ನತ ಪದವಿಗಳಿಸಿ ಮುಂದೆ ಭೌತವಿಜ್ಞಾನಿ ಜೆ.ಜೆ. ತಾಮ್ಸನ್ನನ ವಿದ್ಯಾರ್ಥಿಯಾಗಿ ದಾಖಲಾದ. ಆಸ್ಟ್ರೇಲಿಯಾದ ಅಡಿಲೇಡ್ ವಿಶ್ವವಿದ್ಯಾಲಯದಲ್ಲಿ ಭೌತವಿಜ್ಞಾನದ ಪ್ರ್ರಾಧ್ಯಾಪಕನಾಗಿ ನೇಮಕಗೊಂಡು (1886 - 1908ರ ತನಕ) ಅಲ್ಲಿಯೇ ಸೇವೆ ಸಲ್ಲಿಸಿದ.

ಪ್ರಸಕ್ತ ಶತಮಾನದ ಆದಿಭಾಗದಲ್ಲಿ ಭೌತವಿಜ್ಞಾನಿಗಳಿಗೆ ವಿಶೇಷ ಆಕರ್ಷಕ ವಿಷಯವಾಗಿದ್ದ ವಿಕಿರಣಪಟುತ್ವ (ರೇಡಿಯೊ ಆ್ಯಕ್ಟಿವಿಟಿ) ಕುರಿತು ಬ್ರ್ಯಾಗನ ಆಸಕ್ತಿ ಕುದುರಿತು. ವಿಕಿರಣಪಟು ಪರಮಾಣುಗಳು ಉತ್ಪಾದಿಸುವ ಅಲ್ಪ ಕಣಗಳಿಗೆ ನಿರ್ದಿಷ್ಟಶಕ್ತಿ,  ಆದ್ದರಿಂದ ನಿರ್ದಿಷ್ಟ ವ್ಯಾಪ್ತಿ ಇದೆಯೆಂದು ಈತ ಸೈದ್ಧಾಂತಿಕ ಪರಿಗಣನೆಗಳಿಂದ ತೋರಿಸಿದ. ಅವು ಅವಶೋಷಿತವಾಗುವ (ಪರಿಸರದಿಂದ ಹೀರಲ್ಪಡುವ) ಮುನ್ನ ವಾಯುವಿನ ಅಥವಾ ಇತರ ವಸ್ತುವಿನ ಮೂಲಕ ನಿರ್ದಿಷ್ಟ ದೂರ ಹಾಯಬೇಕು ಎಂದ ಅರ್ಥ. ಇದನ್ನು ಪರೀಕ್ಷಿಸಲು ಬ್ರ್ಯಾಗ್ ಒಂದಿಷ್ಟು ರೇಡಿಯಮನ್ನು ಪ್ರಯೋಗಕ್ಕೆ ಒಳಪಡಿಸಿ (1904) ಅದು ಉತ್ಸರ್ಜಿಸಿದ ಅಲ್ಫ ಕಣಗಳ ವ್ಯಾಪ್ತಿಯನ್ನು ಅಳೆದ. ಅಲ್ಲಿದ್ದುದು ಒಂದು ವ್ಯಾಪ್ತಿಯಲ್ಲ, ಸ್ಪಷ್ಟವಾಗಿ ವಿಭೇದೀಕರಿಸಲ್ಪಟ್ಟಿದ್ದ ಅಸಂಖ್ಯಾತ ವ್ಯಾಪ್ತಿಗಳು. ವಿಕಿರಣಪಟುಧಾತುಗಳು ಹಂತಹಂತವಾಗಿ ಒಡೆದು ಹೋಗುತ್ತವೆ ಮತ್ತು ಮಧ್ಯವರ್ತಿ ಪರಮಾಣುಗಳು ತಮ್ಮವೇ ಆದ ಅಲ್ಪ ಕಣಗಳ ಗಣಗಳನ್ನು ಉತ್ಪಾದಿಸುತ್ತವೆ ಎಂಬುದಾಗಿ ತತ್ಪೂರ್ವ ರುದರ್ಫರ್ಡ್ ಮಂಡಿಸಿದ್ದ ಸಿದ್ಧಾಂತಗಳನ್ನು ಇದು ಪುಷ್ಟೀಕರಿಸಿತು. ಬ್ರ್ಯಾಗ್ ಗುರುತಿಸಿದ ವಿವಿಧ ವ್ಯಾಪ್ತಿಗಳು ವಿಕಿರಣಪಟು ಶ್ರೇಣಿಯಲ್ಲಿಯ ವಿವಿಧ ಮಧ್ಯವರ್ತಿಗಳು ಉತ್ಪಾದಿಸಿದ ಅಲ್ಪ ಕಣಗಳನ್ನು ಪ್ರತಿನಿಧಿಸಿದ್ದುವೆಂಬುದು ಸುಸ್ಪಷ್ಟ. ಇದೊಂದು ಮಹತ್ತರ ಮೂಲಭೂತ ಸಂಶೋಧನೆ.
1909ರಲ್ಲಿ ಇಂಗ್ಲೆಂಡಿಗೆ ಮರಳಿದ ಬ್ರ್ಯಾಗ್ ಲೀಡ್ಸ್ ವಿಶ್ವವಿದ್ಯಾಲಯದಲ್ಲಿ ಪ್ರಾಧ್ಯಾಪಕತ್ವ ಸ್ವೀಕರಿಸಿದ. 1915ರಲ್ಲಿ ಈತನನ್ನು ಯೂನಿವರ್ಸಿಟಿ ಕಾಲೇಜ್ ಲಂಡನ್ನಿಗೆ ವರ್ಗಾಯಿಸಲಾಯಿತು. ಲೀಡ್ಸ್‍ನಲ್ಲಿದ್ದಾಗ ಈತನಿಗೆ ಸ್ಪಟಿಕಗಳಲ್ಲಿ ಎಕ್ಸ್‍ಕಿರಣಗಳ ನಮನ (ಡಿಫ್ರ್ಯಾಕ್ಷನ್) ಕುರಿತು ಲಾವೇ ಮಾಡಿದ್ದ ಕೆಲಸದ ಬಗ್ಗೆ ಸುಳುಹು ದೊರೆಯಿತು. ಆ ವೇಳೆಗೆ ಕೇಂಬ್ರಿಜಿನಲ್ಲಿ ವಿದ್ಯಾರ್ಥಿ ಆಗಿದ್ದ ತನ್ನ ಮಗ ವಿಲಿಯಮ್ ಲಾರೆನ್ಸ್ ಬ್ರ್ಯಾಗನ ಜೊತೆಗೂಡಿ ಈ ದಿಶೆಯಲ್ಲಿ ಸಂಶೋಧನೆ ಮುಂದುವರಿಸಿದ. ಸ್ಫಟಿಕ ನಮನದಿಂದ ಎಕ್ಸ್‍ಕಿರಣಗಳ ಅಲೆಯುದ್ಧಗಳನ್ನು ನಿರ್ಧರಿಸುವ ವಿಧಾನಗಳನ್ನು ಇಬ್ಬರೂ ಜೊತೆಯಾಗಿ ಶೋಧಿಸಿದರು. ಈ ಸಂಶೋಧನೆ ಇವರಿಗೆ ಜೊತೆಯಾಗಿ 1915ರ ನೊಬೆಲ್ ಪಾರಿತೋಷಿಕ ತಂದು ಕೊಟ್ಟಿತು. ತಂದೆ ಮಗ ಜೋಡಿಗೆ ಒಂದೇ ವಿಷಯಕ್ಕೆ ಒಂದೇ ವರ್ಷ ನೊಬೆಲ್ ಬಹುಮಾನ ದೊರೆತ ಏಕೈಕ ನಿದರ್ಶನವಿದು.								*

ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ